ಜನಪದ ದೇವತೆಗಳು -
ಯಾವ ಬಗೆಯ ಲಿಖಿತಾಧಾರಗಳಿಲ್ಲದಿದ್ದರೂ ಅನಾಗರಿಕ ಅಥವಾ ಗ್ರಾಮ್ಯ ಜನಾಂಗಗಳಲ್ಲಿ ಆದಿಕಾಲದಿಂದಲೂ ಉಳಿದು ಬಂದಿರುವ ದೇವತೆಗಳನ್ನು ಜನಪದ ದೇವತೆಗಳೆಂದು ಹೇಳಬಹುದು. ಶಿಷ್ಟ ಪುರಾಣಗಳಲ್ಲಿ, ಶಾಸ್ತ್ರಗ್ರಂಥಗಳಲ್ಲಿ, ಕಾವ್ಯಸಮುದಾಯಗಳಲ್ಲಿ ವೈಭವದಿಂದ ಮೆರೆದಿರುವ ಹಾಗೂ ಶಿಷ್ಟಜನಾಂಗದಿಂದ ಆರಾಧನೆಗೊಳ್ಳುವ ದೇವತೆಗಳನ್ನು ಶಿಷ್ಟದೇವತೆಗಳು ಎಂದು ಕರೆಯಬಹುದು. ಶಿಷ್ಟದೇವತೆಗಳ ಆರಾಧನೆ ಬಳಕೆಗೆ ಬರುವ ಮುನ್ನವೇ ಜನಪದ ದೇವತೆಗಳು ಇದ್ದುದಲ್ಲದೆ ಅವುಗಳಲ್ಲಿ ಅನೇಕವಕ್ಕೆ ಆಧಾರವೂ ಆಗಿದ್ದವು.

ಯಾವುದೇ ದೇವತೆಯ ಹುಟ್ಟಿಗೂ ಯಾವುದಾದರೊಂದು ಕಾರಣ ಇದ್ದೇ ಇರುತ್ತದೆ. ಆದಿಮಾನವ ಅಜ್ಞಾನ ಯುಗದಲ್ಲಿ ಎದುರಿಸಬೇಕಾಗಿ ಬಂದ ಅಸಂಖ್ಯಾತ ಸಮಸ್ಯೆಗಳಿಗೆ ಕಂಡುಕೊಂಡ ಉತ್ತರಗಳಲ್ಲಿ ಈ ದೇವತೆಗಳ ಆರಾಧನೆಯೂ ಒಂದು. ಅವನ ವೈಚಾರಿಕ ದೃಷ್ಟಿ ವಿಸ್ತøತಗೊಂಡಿಲ್ಲದಿದ್ದಾಗ, ಬುದ್ಧಿಶಕ್ತಿ ಬೆಳೆವಣಿಗೆ ಆಗದಿದ್ದಾಗ, ಚಿಂತನಶೀಲತೆ ವಿಕಾಸಗೊಂಡಿಲ್ಲದೆ ಇದ್ದಾಗ ಅವನ ಹಠಾತ್ತಾದ ಎಲ್ಲ ಪ್ರವೃತ್ತಿಗಳಿಗೂ ಬಿಗಿಯಿಲ್ಲದಂತಾಗಿದ್ದು ಅಂಥ ಸಂದರ್ಭಗಳಲ್ಲಿ ಅವನ ಕಲ್ಪನೆ ಗರಿಬಿಚ್ಚಿಕೊಂಡು ಇಚ್ಛಾನುಸಾರವಾಗಿ ನರ್ತಿಸಿತೆಂದು ಹೇಳಬಹುದು. ಗಾಢಾಂಧಕಾರದಲ್ಲಿ ಅವನು ಬಂದಿಯಾದಾಗ, ಬರಗಾಲ ಬಂದು ಗರಬಡಿದಂತಾದಾಗ, ಹುಚ್ಚು ಮಳೆ ಸುರಿದು ಅವನ ಸ್ವತ್ತೆಲ್ಲ ಕೊಚ್ಚಿಕೊಂಡು ಹೋಗುತ್ತಿರುವಾಗ, ಕೊರೆಯುವ ಚಳಿಗಾಳಿಯಲ್ಲಿ ಚಡಪಡಿಸಿದಾಗ, ಗುಡುಗು ಸಿಡಿಲಿಗೆ ತಡಬಡಿಸಿದಾಗ, ಅಗ್ನಿಪರ್ವತಗಳು ಸ್ಫೋಟಗೊಂಡು ಅವನ ಹೃದಯವೇ ಒಡೆದಂತಾದಾಗ, ಭೂಕಂಪನದಿಂದಾಗಿ ಅವನು ತಲ್ಲಣಿಸಿ ಹೋದಾಗ, ಬಿರುಗಾಳಿಯೆದುರು ಅವನು ತರಗೆಲೆಯಂತಾದಾಗ, ಕ್ರೂರವಿಷಜಂತುಗಳೆದುರು ಸ್ವಾಧೀನತಪ್ಪಿದಾಗ, ತನ್ನೆಲ್ಲ ಶಕ್ತಿಯನ್ನೂ ಮೀರಿದ ಮತ್ತು ತನ್ನ ಮೇಲೆ ವಿಕೋಪ ತಾಳಿರುವ ಯಾವುದೋ ಅಗೋಚರ ಶಕ್ತಿಯೊಂದು ಈ ವಿಶ್ವವನ್ನೆಲ್ಲ ಆಳುತ್ತಿರಬೇಕು ಎಂಬ ಭಾವನೆ ಅವನಲ್ಲಿ ಮೂಡಿಬಂತು. ಈ ಉಗ್ರಶಕ್ತಿಯನ್ನು ಶಾಂತಗೊಳಿಸಿ ತನ್ನ ಪರವಾಗಿರುವಂತೆ ಮಾಡಿಕೊಳ್ಳುವ ಹಂಬಲದಿಂದ ಪ್ರಾರ್ಥನೆ, ಆರಾಧನೆಗಳನ್ನು ಆತ ರೂಢಿಸಿಕೊಂಡು ಬಂದ. ಹೀಗೆ ಭಯದಿಂದ ದೇವತೆಗಳ ಸೃಷ್ಟಿ ಹಾಗೂ ಆರಾಧನೆ ಪ್ರಾರಂಭವಾದುದು ಜನಪದ ದೇವತೆಗಳ ಸೃಷ್ಟಿಯ ಒಂದು ಮುಖ. ಇದನ್ನು ಭಯವಾದ ಎಂದು ಹೇಳಬಹುದು.

ಎರಡನೆಯದು ಕೃತಜ್ಞತಾವಾದ. ಫಲ ಕೊಡುವ ವೃಕ್ಷ, ಬೆಳೆ ಕೊಡುವ ಭೂಮಿ, ಮಳೆಗರೆಯುವ ಮುಗಿಲು, ಬೆಳಕೀಯುವ ಸೂರ್ಯ, ತಂಪೀಯುವ ಚಂದ್ರ, ಕಂಪೆಸೆಯುವ ಪುಷ್ಪ, ಹಾಲೀಯುವ ಪಶು, ತನಗಾಗಿ ದುಡಿಯುವ ಮೂಕಪ್ರಾಣಿಗಳು ಮುಂತಾದ ಸುಮಧುರ ಪ್ರಕೃತಿ ವಿಶೇಷಗಳನ್ನು ಕೃತಜ್ಞತೆಯಿಂದ ಸ್ಮರಿಸುವುದು ಹಾಗೂ ಆರಾಧಿಸುವುದು ಅವನ ಹೃದಯವಂತಿಕೆಯ ಪ್ರತೀಕವೆನಿಸಿತು. ಅಲ್ಲದೆ ಒಂದು ಬಣಕ್ಕೂ ಮತ್ತೊಂದು ಬಣಕ್ಕೂ ನಡೆಯುತ್ತಿದ್ದಿರಬಹುದಾದ ಕಲಹಗಳಲ್ಲಿ ತನ್ನ ಜನಾಂಗದ, ತನ್ನ ರಾಷ್ಟ್ರದ, ತನ್ನ ಸಂಸ್ಕøತಿಯ ಉಳಿವು ಉದ್ಧಾರಗಳಿಗಾಗಿ ಶ್ರಮಿಸಿ, ವಿನಾಶಕಾರೀ ಶಕ್ತಿಗಳನ್ನು ದಮನ ಮಾಡಿ ಸಮಷ್ಟಿ ಕಲ್ಯಾಣವನ್ನು ಸಾಧಿಸಿದ ವೀರರನ್ನು ಭಕ್ತಿಯಿಂದ ಆರಾಧಿಸುವುದು ಆಯಾ ಜನಾಂಗದ ಕೃತಜ್ಞತೆಯ ಕುರುಹಾಯಿತು.

ಮೂರನೆಯ ವಿಸ್ಮಯವಾದ. ಆದಿಮಾನವ ಪ್ರಕೃತಿಯ ಅನೇಕ ಅದ್ಭುತ ಸನ್ನಿವೇಶಗಳನ್ನು ಎದುರುಗೊಳ್ಳಬೇಕಾಗಿ ಬಂದಾಗ ಅವನು ವಿಸ್ಮಿತನಾದ. ಪ್ರಕೃತಿಯ ಎಲ್ಲ ಘಟನೆಗಳೂ ಅವನಿಗೆ ಆಶ್ಚರ್ಯವನ್ನುಂಟು ಮಾಡುತ್ತಿದ್ದವು. ಸೂರ್ಯೋದಯ, ಚಂದ್ರೋದಯ, ನದಿಗಳ ಉದ್ಭವ, ಬಿಸಿನೀರಿನ ಚಿಲುಮೆಗಳು, ಕಾಲಕಾಲಕ್ಕೆ ತಕ್ಕಂತೆ ಮಳೆ, ಚಳಿ, ಬೇಸಗೆ ಮುಂತಾದ ಋತುಪರಿವರ್ತನೆಗಳು-ಇವೆಲ್ಲವನ್ನೂ ಕಂಡು ವಿಸ್ಮಿತನಾಗಿ ಅವುಗಳಿಗೂ ದೈವೀಕಲ್ಪನೆಯನ್ನು ಆತ ಆರೋಪಿಸಿದ.
ಸ್ವಪ್ನವಾದವನ್ನೂ ದೇವತೆಗಳ ಕಲ್ಪನೆಗೆ ಮೂಲವೆಂದು ಹೇಳಬಹುದಾದರೂ ಭಯ ಮತ್ತು ಕೃತಜ್ಞತಾವಾದಗಳಷ್ಟು ಅದು ಪ್ರಬಲವಾದುದಲ್ಲ.

ಆದಿಜನಾಂಗವೊಂದು ಸುಸಂಸ್ಕøತವಾಗಿ ನಾಗರಿಕತೆಯ ಸೋಂಕಿಗೊಳಗಾದಾಗ ತಾನು ಪರಂಪರೆಯಿಂದ ಉಳಿಸಿಕೊಂಡು ಬಂದಿರುವ ದೈವೀಕಲ್ಪನೆಗೆ ಸರಿಯಾದ ವ್ಯಾಖ್ಯಾನವನ್ನು ಮಾಡಬೇಕಾಗಿ ಬಂತು. ಹಾಗೆ ಮಾಡದೆ ಇದ್ದಲ್ಲಿ ದೈವೀಕಲ್ಪನೆಗೆ ಹುರುಳಿಲ್ಲದಂತಾಗುತ್ತಿತ್ತು. ಆದ್ದರಿಂದ ಪರಂಪರಾನುಗತ ಸಂಸ್ಕøತಿಯನ್ನು ಶ್ರಮವಹಿಸಿ ಉಳಿಸಿಕೊಳ್ಳಲು ಪ್ರಯತ್ನಿಸಿದವರು ಆ ದೇವತೆಗಳಿಗೆಲ್ಲ ಬೌದ್ಧಿಕ ವ್ಯಾಖ್ಯಾನವನ್ನು ಕೊಟ್ಟು ರಕ್ಷಿಸಿಕೊಂಡರು. ಇವುಗಳ ಜೊತೆಗೆ ಸಾಧು ಸಂತ ಋಷಿವರೇಣ್ಯರುಗಳು ತಮ್ಮ ತಪಸ್ಸಿನಿಂದ ಪಡೆದ ದರ್ಶನವನ್ನು ಮೂರ್ತ ಸ್ವರೂಪಗಳಲ್ಲಿ ಸಾಮಾನ್ಯರಿಗೆ ತಿಳಿಸಲು ಪ್ರಯತ್ನಿಸಿದ ಫಲವಾಗಿ ಸೃಷ್ಟಿಯಾದ ದೇವತೆಗಳು ಶಿಷ್ಟದೇವತೆಗಳಾದವು. ಇವುಗಳಿಗಿರುವ ಸಂಕೇತ ತತ್ತ್ವ, ದರ್ಶನ ಮುಂತಾದವುಗಳಿಂದ ಇವು ವಿಶ್ವದೇವತೆಗಳೆಂಬ ಗೌರವಕ್ಕೆ ಭಾಜನವಾದವು. ಹೀಗೆ ಮೂಲದಲ್ಲಿ ಜನಪದ ದೇವತೆಗಳಾಗಿದ್ದರೂ ಅನಂತರದ ಬೆಳೆವಣಿಗೆಯಲ್ಲಿ ಶಿಷ್ಟತೆಯನ್ನು ಪಡೆದ ಈ ದೇವತೆಗಳ ಸೃಷ್ಟಿಯನ್ನು ದರ್ಶನವಾದವೆಂದು ಕರೆಯಬಹುದು. ಶಿಷ್ಟದೇವತೆಗಳು ಗ್ರಂಥಪದದಲ್ಲಿ ವಿಜೃಂಭಿಸಿದಂತೆ ನಾಗರಿಕರ ದೃಷ್ಟಿಯಲ್ಲಿ ಜನಪದ ದೇವತೆಗಳು ಕ್ಷುದ್ರ ದೇವತೆಗಳು ಎನಿಸಿಕೊಂಡವು.
ಭಾರತದಲ್ಲಿ ಜನಪದ ದೇವತೆಗಳಿಲ್ಲದ ಗ್ರಾಮವೇ ಇಲ್ಲವೆಂದು ಹೇಳಬಹುದು. ಈ ಎಲ್ಲ ದೇವತೆಗಳಿಗೂ ಪರಂಪರಾನುಗತ ಪದ್ಧತಿ, ನಂಬಿಕೆ, ಆಚರಣೆ, ಹಬ್ಬ, ಹರಿದಿನ, ತೆಪ್ಪ, ತಿರುನಾಳುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೂ ಈ ದೇವತೆಗಳಲ್ಲಿ ಕೆಲವು ನಿತ್ಯವೂ ಪೂಜೆಯನ್ನು ಮಾಡಿಸಿಕೊಳ್ಳುವ ಪುಣ್ಯವನ್ನು ಪಡೆದಿವೆ ಎಂದು ಹೇಳಲಾಗುವುದಿಲ್ಲ. ವರ್ಷದ ಯಾವುದೋ ಕೆಲವು ಸಂದರ್ಭಗಳಲ್ಲಿ ಇವುಗಳಿಗೆ ಹಬ್ಬ, ಜಾತ್ರೆ, ಪೂಜೆ ಇತ್ಯಾದಿಗಳು ನಡೆಯುತ್ತವೆ. ಶಿಷ್ಟ ದೇವತೆಗಳಿಗಿರುವಂತೆ ಈ ದೇವತೆಗಳಿಗೆ ಸುಂದರವಾದ ದೊಡ್ಡ ಆಲಯಗಳೂ ಇರುವುದಿಲ್ಲ. ಊರಿನ ಹೊರಗೊ ಮರದ ಕೆಳಗೊ ಕಣಿವೆಯಲ್ಲೊ ಕೆರೆ ಏರಿಯ ಮೇಲೊ ಗುಡ್ಡದ ಮೋಲೊ ನಾಲ್ಕು ಒರಟು ಕಲ್ಲಿನ ಚಪ್ಪಡಿಗಳನ್ನು ನಿಲ್ಲಿಸಿ ಕಟ್ಟಿದ ಗುಡಿಗಳೇ ಈ ದೇವತೆಗಳಿಗೆ ಆಲಯಗಳು. ಶಿಷ್ಟದೇವತೆಗಳಂತೆ ಇವು ಎಷ್ಟೋ ವೇಳೆ ಕೆತ್ತನೆಯ ಸುಂದರವಾದ ವಿಗ್ರಹಗಳಾಗಿರದೆ ಬರೀ ಕಲ್ಲುಗಳಾಗಿರುತ್ತವೆ. ಹೀಗೆ ಶಿಷ್ಟದೇವತೆಗಳಿಗಿರುವ ಸವಲತ್ತುಗಳು ಈ ದೇವತೆಗಳಿಗಿಲ್ಲದಿದ್ದರೂ ಇವು ಗ್ರಾಮದ ಅಧಿಷ್ಠಾತ್ರಿ ದೇವತೆಗಳಾಗಿದ್ದು ಗ್ರಾಮದ ಆಗುಹೋಗುಗಳ ಸರ್ವಾಧಿಕಾರಿಗಳಾಗಿ ಗ್ರಾಮದ ಸಂರಕ್ಷಕರಾಗಿ ಗ್ರಾಮದ ಜನತೆಯ ಭಯಭಕ್ತಿಗಳನ್ನು ಗಳಿಸಿಕೊಂಡಿವೆ.
ಜನಪದ ದೇವತೆಗಳನ್ನು ಪೂಜಿಸುವ ಅರ್ಚಕರು ಸಾಮಾನ್ಯವಾಗಿ ಶೂದ್ರರೇ ಆಗಿದ್ದರೂ ಅಪರೂಪವಾಗಿ ಬ್ರಾಹ್ಮಣರೂ ಅರ್ಚಕರಾಗಿರುವ ಉದಾಹರಣೆಗಳೂ ಇವೆ. ಶಿಷ್ಟದೇವತೆಗಳ ಆರಾಧನೆಗೂ ಜನಪದ ದೇವತೆಗಳ ಆರಾಧನೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಅವುಗಳಲ್ಲಿ ಮುಖ್ಯವಾದುದು ಬಲಿ. ಜನಪದ ದೇವತೆಗಳು ಬಲಿಯಿಂದ ಸುಪ್ರೀತವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವತೆಗಳ ಅಲಂಕಾರ ಇತ್ಯಾದಿಗಳೂ ತೀರ ವಿಲಕ್ಷಣವಾಗಿರುತ್ತವೆ. ಅರಿಸಿನ, ಕುಂಕುಮ, ಕೋಳಿ, ಕುರಿ, ಆಡು, ಕೋಣ, ಹಂದಿ, ತಂಬಿಟ್ಟು, ಎಳನೀರು ಮಡೆಯನ್ನ, ರಕ್ತದನ್ನ, ಅರಿಸಿನದ ಅನ್ನ, ಕುಂಕುಮದನ್ನ, ಮೊಸರನ್ನ, ಎಳ್ಳುಂಡೆ, ಬೇವಿನಸೊಪ್ಪು ಮುಂತಾದವುಗಳಿಂದ ಈ ದೇವತೆಗಳನ್ನು ಆರಾಧಿಸುತ್ತಾರೆ.
ಜನತೆ ಈ ದೇವತೆಗಳಿಗೆ ಒಪ್ಪಿಸುವ ಹರಕೆಗಳೂ ತೀರ ವಿಚಿತ್ರವಾದವು. ಅವರು ಹೊರುವ ಹರಕೆಗಳು ಎಷ್ಟೇ ಕಠಿಣವೆನಿಸಿದ್ದರೂ ಅವರು ಆ ದೇವತೆಗಳ ಬಗೆಗೆ ಇಟ್ಟಿರುವ ಭಯ, ಭಕ್ತಿ, ನಂಬಿಕೆಗಳು ಅಚಲವಾದವುಗಳು. ಮಿಂದು ಒದ್ದೆ ಬಟ್ಟೆಯಲ್ಲಿ ಗುಡಿಯ ಸುತ್ತ ಉರುಳುವ ಉರುಳು ಸೇವೆ. ಒಂದೇ ಮಗ್ಗುಲಲ್ಲಿ ಗುಡಿಸುತ್ತ ತೆವಳುವ ಒಚ್ಚ ಮಗ್ಗಲು ಸೇವೆ, ಹೆಜ್ಜೆಗೊಂದು ಸಲ ಅಡ್ಡ ಬಿದ್ದು ನಮಸ್ಕರಿಸುವ ಹೆಜ್ಜೆ ನಮಸ್ಕಾರದ ಸೇವೆ, ಮೈಗೆಲ್ಲ ದಬ್ಬಳದ ಗಾತ್ರ ಸರಳುಗಳನ್ನು ಚುಚ್ಚಿಕೊಂಡು ತಮ್ಮಟೆ ಹೊಡೆಸುತ್ತ ಅದರ ಗತ್ತಿಗೆ ತಕ್ಕಂತೆ ಕುಣಿದಾಡುತ್ತ ಹರಕೆ ಒಪ್ಪಿಸುವ ಸರಳು ಪವಾಡದ ಸೇವೆ, ತನ್ನ ತೂಕದ ಬೆಲ್ಲವನ್ನು ತೂಗಿಸುವ ತುಲಾಭಾರಸೇವೆ, ಮಂಡೆ ಚವುರ ಮಾಡಿಸಿಕೊಳ್ಳುವ ಮುಡಿಕೊಡುವ ಸೇವೆ, ಬಾಯಿ ಬೀಗದ ಸೇವೆ, ತಾನು ಅತ್ಯಂತ ಮೆಚ್ಚಿ ತಿನ್ನುತ್ತಿದ್ದ ಫಲವನ್ನು ದೇವರ ಹೆಸರಿನಲ್ಲಿ ತಿನ್ನದೆ ವರ್ಜಿಸುವ ಫಲ ಬಿಡುವ ಸೇವೆ, ಧೂಪದ ಸೇವೆ, ಕೊಂಡಕ್ಕೆ ಹರಳು ಬೀಜ ಹಾಕುವ ಸೇವೆ-ಇತ್ಯಾದಿಗಳಲ್ಲದೆ ಇನ್ನೂ ಕೆಲವು ಭಯಂಕರ ಸೇವೆಗಳೂ ಜನಪದ ದೇವತೆಗಳಿಗೆ ಸಲ್ಲುತ್ತವೆ. ಅವುಗಳೆಂದರೆ ಗಂಡಸು ಹೆಂಗಸಾಗುವ, ಹೆಂಗಸು ಗಂಡಸಾಗುವ ಜೋಗ್ತಿ ಸಂಪ್ರದಾಯವನ್ನು ಎಲ್ಲಮ್ಮನಿಗೆ ಹರಕೆ ಹೊತ್ತವರು ನಡೆಸಿಕೊಂಡು ಬಂದಿದ್ದಾರೆ. ಜನಪದ ಧಾರ್ಮಿಕ ವೃತ್ತಿಗಾಯಕರೆಲ್ಲರೂ ತಮ್ಮ ತಮ್ಮ ದೇವರುಗಳಿಗೆ ಗುಡ್ಡರೋ ನೀಲಗಾರರೋ ಆಗಿ ಆ ದೇವತೆಯನ್ನು ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಾರೆ. ಇವಲ್ಲದೆ ಅನೈತಿಕವೆನಿಸಿದರೂ ದೇವರ ಹೆಸರಿನಲ್ಲಿ ಕೆಲವು ಹೆಂಗಸರು ಸಂತಾನಾಪೇಕ್ಷೆಯಿಂದ ಜಾತ್ರೆಗಳಲ್ಲಿ ಪರಪುರುಷನನ್ನು ಕೂಡುವ ತೇರಿನ ಪಟ್ಟಡಿಸೇವೆ, ತಾಳೆಮೆಳೆ ಸೇವೆ, ಹೊಳೆಕರೆ ಸೇವೆಗಳೂ ಉಂಟು.

ಶಿಷ್ಟಪುರಾಣಗಳ ತ್ರಿಮೂರ್ತಿಗಳು ಸೃಷ್ಟಿಸ್ಥಿತಿಲಯಗಳ ಪ್ರತೀಕವೆನಿಸಿರುವಂತೆ ಜನಪದ ದೇವತೆಗಳು ಈ ಬಗೆಯ ವಿಶ್ವದೇವತೆಗಳಾಗಿರದೆ ವಿಶ್ವದ ವ್ಯಾಪಕತೆಗೆ ಸಂಬಂಧಿಸಿದ ಸಂಕೇತಗಳೂ ಆಗಿರದೆ ಅವು ಗ್ರಾಮಜೀವನದ ಪ್ರತೀಕಗಳಾಗಿ ಮಾತ್ರ ಸಂಬಂಧಿಸಿದ ಸಂಕೇತಗಳೂ ಆಗಿರದೆ ಅವು ಗ್ರಾಮಜೀವನದ ಪ್ರತೀಕಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ಪ್ರಪಂಚದ ಸೃಷ್ಟಿಸ್ಥಿತಿಲಯ ಮುಂತಾದ ಮಹಾಶಕ್ತಿಗಳನ್ನು ಪ್ರತಿನಿಧಿಸದೆ ಅವು ಕಾಲರ, ಸಿಡುಬು, ದಡಾರ, ಪ್ಲೇಗು ಹಾಗೂ ದನಕರುಗಳಿಗೆ ಬರುವ ರೋಗಗಳ ಅಧಿದೇವತೆಗಳಾಗಿ ಕಾಣಿಸಿಕೊಳ್ಳುತ್ತವೆ.

ತಮ್ಮ ಶಕ್ತಿಯ ಪರಿಮಿತಿಯೊಳಗೇ ತಮ್ಮ ಪ್ರಭಾವವನ್ನು ಬೀರುವ ಜನಪದ ದೇವತೆಗಳಲ್ಲಿ ಹೆಚ್ಚಿನವು ಹೆಣ್ಣುದೇವತೆಗಳಾಗಿವೆ. ಆರ್ಯ ದೇವತೆಗಳಲ್ಲಿ ಈಶ್ವರ ವಿಷ್ಣು ಬ್ರಹ್ಮರಾದಿಯಾಗಿ ಪುರುಷದೇವತೆಗಳ ಪ್ರಾಬಲ್ಯವನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ಜನಪದ ದೇವತೆಗಳಲ್ಲಿ ಶಿಷ್ಟದೇವರಾಗಿ ಪರಿವರ್ತನೆ ಹೊಂದಿರುವ ಈಶ್ವರನ ಮಡದಿ ಪಾರ್ವತಿಯೇ ಕಾಳಿ ಮುಂತಾದ ಹೆಸರುಗಳಲ್ಲಿ ಜನಪದ ದೇವತೆಯಾಗಿದ್ದಾಳೆ ಅಥವಾ ಎಲ್ಲ ಹೆಣ್ಣು ದೇವತೆಗಳಿಗೂ ಆಧಾರಭೂತಳಾಗಿದ್ದಾಳೆ. ಆರ್ಯ ಜನಾಂಗದ ದೇವತೆಗಳು ಹೆಚ್ಚು ಸಂಖ್ಯೆಯಲ್ಲಿ ಪುರುಷದೇವತೆಗಳಾಗಿದ್ದರೆ ದ್ರಾವಿಡ ದೇವತೆಗಳು ಅದರಲ್ಲೂ ಜನಪದ ದೇವತೆಗಳು ಹೆಚ್ಚು ಸ್ತ್ರೀದೇವತೆಗಳಾಗಿರುವುದು ಒಂದು ಸೋಜಿಗದ ಸಂಗತಿ. ಇದಕ್ಕೆ ವಿದ್ವಾಂಸರನೇಕರು ಬೇರೆ ಬೇರೆ ಕಾರಣಗಳನ್ನು ಕೊಡಲು ಪ್ರಯತ್ನಿಸಿದ್ದರೂ ಅವು ಅಷ್ವು ತರ್ಕಸಮ್ಮತವಾಗಿಲ್ಲವೆಂದೇ ಹೇಳಬಹುದು. ಆದರೂ ಅವರ ಅಭಿಪ್ರಾಯದಲ್ಲಿ ಪ್ರಪಂಚದ ಆದ್ಯಂತ ಯುದ್ಧ ದೇವತೆಗಳೆಲ್ಲ ಪುರುಷರೇ ಆಗಿದ್ದು ಬೇಸಾಯ ದೇವತೆಗಳು ಸ್ತ್ರೀಯರಾಗಿರುವುದರಿಂದ ಬೇಸಾಯಾವಲಂಬಿಗಳಾದ ದ್ರಾವಿಡರ ದೇವತೆಗಳು ಸ್ತ್ರೀಯರಾಗಿರುವುದರಿಂದ ಬೇಸಾಯಾವಲಂಬಿಗಳಾದ ದ್ರಾವಿಡರ ದೇವತೆಗಳು ಸ್ತ್ರೀದೇವತೆಗಳೆಂದು ಅಭಿಪ್ರಾಯಪಡುತ್ತಾರೆ. ಮತ್ತೊಬ್ಬ ವಿದ್ವಾಂಸರು ದ್ರಾವಿಡ ಹೆಂಗಸರು ರಬಾಜಿಯರೆಂದೂ ಅದಕ್ಕಾಗಿ ಭಯದಿಂದ ಅವರನ್ನು ತೃಪ್ತಿಪಡಿಸಲೋಸುಗ ಸ್ತ್ರೀದೇವತಾರಾಧನೆ ಆಚರಣೆಗೆ ಬಂದಿರಬೇಕೆಂದೂ ಹೇಳುತ್ತಾರೆ. ಇದಕ್ಕೆ ಕಾರಣ ಏನೇ ಇರಲಿ ದ್ರಾವಿಡ ಜನಪದ ದೇವತೆಗಳಲ್ಲಿ ಹೆಚ್ಚು ಸಂಖ್ಯೆಯವು ಸ್ತ್ರೀದೇವತೆಗಳು. ಪುರುಷದೇವತೆಗಳು ಬಂದರೂ ಅವರು ಸ್ತ್ರೀದೇವತೆಗಳ ಸಹೋದರರಾಗಿಯೋ ಗಂಡಂದಿರಾಗಿಯೋ ಕಾಣಿಸಿಕೊಳ್ಳುತ್ತವೆ. ಹೀಗಲ್ಲದೆ ದ್ರಾವಿಡ ಪುರುಷ ದೇವತೆಗಳಲ್ಲಿ ಮಾದೇಶ್ವರ, ಮಂಟೆಸ್ವಾಮಿ, ಚೋಕುಮಾರ, ಅಯ್ಯನಾರ್, ಪೋಟುರಾಜು, ಮುಡುಕತೊರೆ ಮಲ್ಲಪ್ಪ, ಹನುಮಪ್ಪ ಮುಂತಾದ ದೇವತೆಗಳು ಸ್ವಂತಂತ್ರ ಅಸ್ತಿತ್ವನ್ನು ಗಳಿಸಿಕೊಂಡಿವೆ.

ಜನಪದ ದೇವತೆಗಳಿಗೆ ಕೋಣ, ಕುರಿ, ಕೋಳಿ, ಆಡು, ಹಂದಿ ಮುಂತಾದ ಪ್ರಾಣಿಬಲಿ ಕೊಡುತ್ತಿದ್ದಂತೆ ನರಬಲಿಯನ್ನೂ ಕೊಟ್ಟ ಉದಾಹರಣೆಗಳು ಇವೆ. ನರಬಲಿಯನ್ನು ಕೇಳಿದ ಕೆಲವು ದೇವತೆಗಳ ಗುಡಿಯನ್ನೇ ಕಲ್ಲುಮಣ್ಣುಗಳಿಂದ ಮುಚ್ಚಿರುವ ಉದಾಹರಣೆಯನ್ನೂ ನೋಡಬಹುದಾಗಿದೆ. ಇತ್ತೀಚೆಗೆ ನರಬಲಿ ಕೊಡುವ ಸಂಪ್ರದಾಯ ಕಣ್ಮರೆಯಾಗುತ್ತಿದೆಯಾದರೂ ಆಗಾಗ ಕೆಲವು ಮಾಂತ್ರಿಕರು ದೇವಿಯನ್ನು ವಶಪಡಿಸಿಕೊಳ್ಳಲು ಬಲಿಗಾಗಿ ಚಿಕ್ಕ ಮಕ್ಕಳನ್ನು ಅಪಹರಿಸುವ ಸುದ್ದಿಗಳನ್ನು ದಿನಪತ್ರಿಕೆಗಳು ಆಗಾಗ ಪ್ರಕಟಿಸುತ್ತಿರುತ್ತವೆ. ನರಬಲಿ ಇಲ್ಲದೆ ಇದ್ದರೂ ಹೆಂಡ, ಭಂಗಿ, ಮತ್ತು ಪ್ರಾಣಿಗಳ ಬಲಿಕೊಡುವ ಸಂಪ್ರದಾಯಗಳು ಇನ್ನೂ ಜೀವಂತವಾಗಿರುವುದನ್ನು ನೋಡಬಹುದಾಗಿದೆ.

ಜನಪದ ದೇವತೆಗಳ ಕಲ್ಪನೆ, ಆರಾಧನೆ, ಆಚರಣೆ ಮುಂತಾದವುಗಳಿಗೆಲ್ಲ ಖಚಿತವಾದ ಹಿನ್ನೆಲೆಯನ್ನು ಒದಗಿಸುವುದು ಕಷ್ಟಸಾಧ್ಯವಾದ ಕಾರ್ಯ. ಏಕೆಂದರೆ ಇವನ್ನು ಕುರಿತ ಯಾವ ಐತಿಹಾಸಿಕ ದಾಖಲೆಗಳೂ ಲಿಖಿತರೂಪದಲ್ಲಿ ದೊರೆಯುವುದಿಲ್ಲ. ಆದ್ದರಿಂದ ಇವುಗಳ ಇತಿವೃತ್ತಗಳಿಗೆಲ್ಲ ಪರಂಪರೆಯಿಂದ ಕಂಠಸ್ಥರೂಪದಲ್ಲಿ ಬೆಳೆದುಳಿದು ಬಂದಿರುವ ಜಾನಪದವನ್ನೇ ಮೊರೆಹೋಗಬೇಕಾಗುತ್ತದೆ. ಈ ದೇವತೆಗಳ ಆರಾಧನೆಯ ಸಂದರ್ಭಗಳಲ್ಲಿ ಹಾಡುವ ಸ್ತುತಿಗೀತೆಗಳು, ಪುರಾಣಕತೆಗಳು, ಐತಿಹ್ಯಗಳು, ಲಾವಣಿಗಳು ಮುಂತಾದವುಗಳಿಂದ ಅವುಗಳಲ್ಲಿ ಅಡಗಿರಬಹುದಾದ ಐತಿಹಾಸಿಕತೆಯನ್ನು ಅಗೆದು ತೆಗೆಯಬಹುದಾಗಿದೆ. ಏಕೆಂದರೆ ಜಾನಪದ ಪರಂಪರಾನುಗತವಾಗಿ ಬಂದ ಐತಿಹಾಸಿಕ ವಿಷಯಗಳಿಗೆ ಜೀವಂತ ಸಾಕ್ಷಿಯಾಗಿರುತ್ತದೆ ಎಂಬ ಮಾತನ್ನು ಅಲಕ್ಷ್ಯಮಾಡುವಂತಿಲ್ಲ. ಈ ಬಗೆಯ ಆಧಾರಗಳನ್ನು ಗಮನಿಸಿದಾಗ ವೀರರು, ಪತಿವ್ರತೆಯರು, ಸಾಧುಸಂತರು, ಪಿತೃಗಳು, ಪ್ರಾಣಿಗಳು, ಬಲಿಯಾದವರು, ಆತ್ಮಹತ್ಯೆ ಮಾಡಿಕೊಂಡವರು, ಭೂತಪ್ರೇತಗಳು ಮರಗಿಡಗಳು, ಗ್ರಹನಕ್ಷತ್ರಗಳು, ನದೀನದಗಳು-ಎಲ್ಲವೂ ಜನಪದ ದೇವತೆಗಳಾಗಿರುವುದು ಕಂಡುಬರುತ್ತದೆ.

ಜನಪದ ದೇವತೆಗಳನ್ನು ಪ್ರಧಾನವಾಗಿ ಗ್ರಾಮದೇವತೆ, ಸ್ಥಾನದೇವತೆ, ಕುಲದೇವತೆ, ಇಷ್ಟದೇವತೆ ಮತ್ತು ಗೃಹದೇವತೆ ಎಂಬುದಾಗಿ ಐದು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಈ ಸಂಖ್ಯೆಯನ್ನು ವಿಸ್ತರಿಸಲೂಬಹುದು. ಆದರೂ ಈ ಬಗೆಯ ವಿಭಜನೆಯಿಂದ ಕೆಲಮಟ್ಟಿನ ತೊಡಕುಗಳು ಉಳಿದೇ ಉಳಿಯುವುದರಿಂದ ಈ ಕ್ರಮವೇ ಸರಿಯೆಂದು ಹೇಳುವಂತಿಲ್ಲ. ಆದರೆ ಅಧ್ಯಯನ ದೃಷ್ಟಿಯಿಂದ ಈ ಬಗೆಯ ವಿಭಜನೆ ಸಾಧು ಹಾಗೂ ಶಾಸ್ತ್ರೀಯವೆಂದು ಕಾಣುತ್ತದೆ. ಕೆಲವೊಮ್ಮೆ ಒಂದು ಸ್ಥಾನದೇವತೆಯಾಗಿರಬಹುದು ; ಒಂದು ಸ್ಥಾನದೇವತೆ ಕೆಲವರ ಕುಲದೇವತೆಯೂ ಆಗಿರಬಹುದಾದ್ದರಿಂದ ಈ ವಿಭಜನಾಕ್ರಮ ಸ್ವಲ್ಪಮಟ್ಟಿಗೆ ಅತೃಪ್ತಿಕರವಾಗಿಯೇ ಉಳಿಯುತ್ತದೆ.

ಪ್ರತಿಯೊಂದು ಗ್ರಾಮಕ್ಕೂ ಒಂದು ಗ್ರಾಮದೇವತೆ ಇರುತ್ತದೆ. ಗ್ರಾಮದೇವತೆಗಳೆಲ್ಲ ಸ್ತ್ರೀದೇವತೆಗಳೇ ಆಗಿದ್ದರೂ ಕೆಲವು ಕಡೆ ಬಸವ, ಹನುಮ, ಭೈರವ, ಬೀರಪ್ಪ, ಶಿವ ಮುಂತಾದ ಪುರುಷದೇವತೆಗಳೂ ಗ್ರಾಮದೇವತೆಗಳಾಗಿರುವುದು ಕಂಡುಬಂದಿದೆ.

ಕರ್ನಾಟದ ಹೆಚ್ಚು ಕಡೆಗಳಲ್ಲಿ ಮಾರಮ್ಮ ಗ್ರಾಮದೇವತೆಯಾಗಿದ್ದಾಳೆ. ಮಾರಿಗೆ ಕಬ್ಬಾಳದ ದುರುಗಮ್ಮ, ಹಟ್ಟಿ ಲಕ್ಷ್ಮಮ್ಮ, ಬೆಟ್ಟದ ಚಿಕ್ಕಮ್ಮ, ಕರುಳೆಕೆಲ್ಲ ದೇವಮ್ಮ, ಬೆಟ್ಟಳ್ಳಿ ಮಾರಮ್ಮ, ಕಲ್ಲೂರ ಮಲ್ಲುಗದೇವಿ, ಮುಡುಗುಂಡ್ದ ಮುಳ್ಳಾಚಿ, ಬನ್ನೂರು ಹ್ಯಾಮಾದ್ರಿ, ಪಿರಯಾಪಟ್ಣದ ಬರಿಮಸ್ಣಿ, ಎಲ್ಲಮ್ಮ ಎಕನಾತಿ, ಅಗರ ದಿಂಡಿನ ಮಾರಿ, ಕುಂಡ್ಮಾರಿ, ಕಿವುಡ್ಮಾರಿ ಕುಂಟ್ಮಾರಿ, ಬೆಟ್ಟದ ಚಾಮುಂಡಿ, ಬೆಂಕಿಮಾರಿ, ದೂರದ ದುಬ್ಲಮ್ಮ, ಕೊಡಗಿನ ಮಮ್ಮಾಯಿ, ಮೂಕಳ್ಳಿ ಮಾಮಾರಿ, ಬಲಮಂಕಾಳಿ, ಉತ್ತನಳ್ಳಿ ಮಾರಿ, ಸೀಗುಮಾರಿ, ದಂಡಿನಮಾರಿ, ಚಿಕುದೇವಿ, ಮೊಗೆಯಮ್ಮ, ಮಾಸ್ತಮ್ಮ, ಬಾಣಂತಮ್ಮ, ಬಿಸಲಾಳಿಯಮ್ಮ, ಹಾಸನಮ್ಮ, ಅಂಕಾಲಮ್ಮ ಮುಂತಾದ ಬೇರೆ ಬೇರೆ ಹೆಸರುಗಳಿವೆ. ಮಂಟೇಸ್ವಾಮಿ ಮತ್ತು ಮಾದೇಶ್ವರರು ಈ ಮಾರಿಯರನ್ನು ಕಟ್ಟಿ ಆಳುತ್ತಿದ್ದರಂತೆ. ಅವರ ಅಪ್ಪಣೆಯ ಮೇರೆಗೆ ಇವರೆಲ್ಲ ಬೇರೆ ಬೇರೆ ಊರುಗಳನ್ನು ಸೇರಿ ಗ್ರಾಮದೇವತೆಗಳಾದಂತೆ. ಈ ಮಾರಿಯರೆಲ್ಲ ಉತ್ತರದಿಂದ ಬಂದರೆಂಬುದು ಅತ್ಯಂತ ಪ್ರಚಲಿತವಾದ ಆಶಯ. ಅಲ್ಲದೆ ಇವರ ಸಂಖ್ಯೆ ಪ್ರಾರಂಭದಲ್ಲಿ ಏಳು ಇದ್ದು ಅನಂತರದಲ್ಲಿ ಏಳನೂರು ಏಳುಸಾವಿರ ಆಗಿದೆ. ಗ್ರಾಮದೇವತೆಗಳು ಗ್ರಾಮದ ಸಂರಕ್ಷಕರು. ಅವರು ರೋಗರುಜಿನ ಮೊದಲಾದ ಅನಿಷ್ಟಗಳು ಗ್ರಾಮವನ್ನು ಪ್ರವೇಶಿಸದಂತೆ ಕಾಯ್ದುಕೊಂಡಿರುತ್ತಾರೆ. ಅದಕ್ಕಾಗಿಯೇ ಗ್ರಾಮದೇವತೆಗಳ ಗುಡಿ ಊರಿನ ಹೆಬ್ಬಾಗಿಲ ಬಳಿಯಲ್ಲೇ ಇರುತ್ತದೆ. ಪರಸ್ಥಳದಿಂದ ವಲಸೆ ಬಂದ ಕ್ರೂರ ದೇವತೆಗಳು ಗ್ರಾಮವನ್ನು ಹೊಕ್ಕಲು ಪ್ರಯತ್ನಿಸಿದಾಗ ಗ್ರಾಮದೇವತೆಗಳು ಅವನ್ನು ಹೊಡೆದೋಡಿಸುತ್ತವೆ. ಊರಿನ ಜನ ಗ್ರಾಮ ದೇವತೆಯ ಹಬ್ಬಮಾಡದೆ ಅಲಕ್ಷ್ಯ ಮಾಡಿದಾಗ ಕೂಗುಮಾರಿ ಊರನ್ನು ನಟ್ಟಿರುಳಿನಲ್ಲಿ ಪ್ರವೇಶಿಸಿ ಕಾಕು ಹಾಕುತ್ತ ಬೀದಿ ಬೀದಿಗಳಲ್ಲೆಲ್ಲ ಓಡಾಡುತ್ತಿರುತ್ತಾಳೆ. ಇವಳ ದನಿಯನ್ನು ಕೇಳಿದವರು ಓಗೊಟ್ಟರೆ ಸತ್ತುಹೋಗುತ್ತಾರಂತೆ. ಅದಕ್ಕಾಗಿ ಹಳ್ಳಿಯ ಜನ ಈ ಮಾರಿ ತಮ್ಮ ಮನೆಯೊಳಕ್ಕೆ ಬರದಿರಲೆಂದು ಬಾಗಿಲ ಮೇಲೆ ನಾಳೆ ಬಾ ಎಂದು ಬರೆದಿರುತ್ತಾರೆ. ಈ ಕೂಗುಮಾರಿ ಗ್ರಾಮದೇವತೆಯ ತಂಗಿಯೇ ಇನ್ನಾವುದಾದರೂ ಸಂಬಂಧದವಳೊ ಆಗಿರುತ್ತಾಳೆ. ಗ್ರಾಮದೇವತೆಯ ಪರವಾಗಿ ಇವಳು ಊರಿನ ಜನರನ್ನು ಎಚ್ಚರಿಸಿ ಹಬ್ಬ ಮಾಡಲು ಸೂಚನೆ ಕೊಡುತ್ತಾಳೆಂದು ನಂಬುತ್ತಾರೆ. ಗ್ರಾಮದೇವತೆ ರೋಗದೇವತೆಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತಾಳೆ. 	(ನೋಡಿ- ಗ್ರಾಮದೇವತೆ)

ಸ್ಥಾನದೇವತೆಗಳು ಒಂದು ಸುತ್ತಿನ ಹತ್ತಾರು ಊರುಗಳ ಮೇಲೆ ಪ್ರಭಾವ ಬೀರುತ್ತವೆ. ಇವನ್ನು ಸ್ಥಳದೇವತೆಗಳೆಂದೂ ಕರೆಯುತ್ತಾರೆ. ಸ್ಥಾನದೇವತೆಗಳು ಹತ್ತಾರು ಹಳ್ಳಿಗಳ ದೇವತೆಗಳನ್ನು ಆಳುವಂಥವು. ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಭೈರವ, ಸಿದ್ದಪ್ಪಾಜಿ, ರಾಚಪ್ಪಾಜಿ, ಕೊಂಗಳ್ಳಿಮಲ್ಲಮ್ಮ, ಮುಡುಕ್ತೊರೆ ಮಲ್ಲಮ್ಮ, ಬೆಟ್ಟದ ಚಾಮುಂಡಿ, ಸವದತ್ತಿ ಎಲ್ಲಮ್ಮ, ತುಳಜಾಪುರದ ಭವಾನಿ, ಧರ್ಮಸ್ಥಳದ ಮಂಜುನಾಥ, ಬಿಳಿಗಿರಿರಂಗ-ಮುಂತಾದ ದೇವತೆಗಳು ಈ ಗುಂಪಿನಲ್ಲಿ ಸೇರುತ್ತವೆ. ಇವುಗಳ ಸ್ಥಾನಮಾನಗಳು ಇನ್ನಿತರ ದೇವತೆಗಳಿಗಿಂತ ಹೆಚ್ಚಿನವಾಗಿರುತ್ತವೆ.

ಪ್ರಾಚೀನ ಬುಡಕಟ್ಟಿನ ಜನಗಳಲ್ಲಿ ರಕ್ತಸಂಬಂಧಕ್ಕನುಗುಣವಾಗಿ ಹಲವಾರು ಗುಂಪುಗಳು ಕಂಡುಬರುತ್ತವೆ. ಈ ಪ್ರತಿಯೊಂದು ಗುಂಪೂ ಪ್ರಾಣಿಗಳನ್ನಾಗಲಿ, ಸಸ್ಯಗಳನ್ನಾಗಲಿ, ಗ್ರಹನಕ್ಷತ್ರಗಳನ್ನಾಗಲಿ ತಮ್ಮ ಕುಲದೈವವೆಂದು ಪರಿಗಣಿಸಿ ತಮ್ಮ ವಂಶದ ಮೂಲವನ್ನು ಅವುಗಳಿಗೆ ಆರೋಪಿಸುವ ಪದ್ಧತಿ ಪ್ರಪಂಚದ ಆದ್ಯಂತ ಕಂಡುಬಂದಿದೆ. ಮುಂದುವರಿದ ಜನಾಂಗಗಳಲ್ಲೂ ಇದು ಇದೆ ಎಂಬುದು ನಮ್ಮಲ್ಲಿ ಕಂಡುಬರುವ ಆನೆಗುಲ, ಬೆಳ್ಳಿಗುಲ ಎನ್ನುವ ಮಾತುಗಳಿಂದ ವ್ಯಕ್ತವಾಗುತ್ತದೆ. ತಾವು ಆರಾಧಿಸುವ ವಸ್ತುವನ್ನು ಗೋತ್ರ ಎಂದು ಕರೆಯಲಾಗಿದೆ. ಗೋತ್ರವೆಂದರೆ ತಮ್ಮ ಬುಡಕಟ್ಟಿನ ಮೂಲಪುರಷನೆಂದೂ ತಮ್ಮ ಕುಲದೇವತೆಯೆಂದೂ ತಿಳಿಯುವವರಿದ್ದಾರೆ. ತೋಡರು ತಮ್ಮ ಕುಲದೇವರು ಎಮ್ಮೆ ಎಂದೂ ಅಮೆರಿಕದ ಪೂರ್ಜರು ಕಾಗೆ ಮತ್ತು ಮೊಸಳೆ ತಮ್ಮ ಕುಲದೇವರೆಂದೂ ಭಾರತದ ಕಾಡುಜನ ಸರ್ಪವನ್ನು ತಮ್ಮ ಕುಲದೇವರೆಂದೂ ಹೇಳಿಕೊಳ್ಳುತ್ತಾರೆ. ಕುಲದೇವತೆಯ ಅತೃಪ್ತಿ ಮತ್ತು ಕೋಪಕ್ಕೆ ತುತ್ತಾಗಬಾರದೆಂದು ಅವುಗಳ ಬಗೆಗಿನ ಭಯಭಕ್ತಿಯಿಂದ ಹಲವಾರು ಬಹಿಷ್ಕಾರಾಜ್ಞೆಗಳನ್ನು ರೂಢಿಗೆ ತಂದಿರುವುದನ್ನು ತೋಡರು ಎಮ್ಮೆಯ ಬಗೆಗೆ ತಳೆದಿರುವ ವಿಚಿತ್ರ ನಿಲುವುಗಳು ಸಮರ್ಥಿಸುತ್ತವೆ. ಹೀಗಾಗಿ ಆದಿಜನಾಂಗದವರು ಯಾವುದಾದರೂ ಒಂದು ಪ್ರಾಣಿಯನ್ನೋ ಅಥವಾ ವಸ್ತುವನ್ನೋ ತಮ್ಮ ಕುಲದ ಸಂಕೇತವೆಂದು ಭಾವಿಸಿ ಅದನ್ನು ಪವಿತ್ರ ಹಾಗೂ ಪೂಜ್ಯವೆಂದು ಪರಿಗಣಿಸುತ್ತಿದ್ದರು. ಜೆ. ಲ್ಯಾಂಗ್ ಎಂಬ ಮಾನವಶಾಸ್ತ್ರಜ್ಞ ಈ ಅಭಿಪ್ರಾಯವನ್ನು ಮೊದಲಿಗೆ ಬೆಳಕಿಗೆ ತಂದ. ಒಂದು ವರ್ಗದ ಕುಲಚಿಹ್ನೆಯನ್ನು ಈತ ಆ ವರ್ಗವನ್ನು ರಕ್ಷಿಸುವ ಪ್ರಿಯಪಿಶಾಚಿ ಎಂದು ಕರೆದ. ಈ ಪ್ರಿಯಪಿಶಾಚಿ ಪ್ರಾಣಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದು ಇವನ ಮತ. ಈ ಒಂದು ಪದ್ಧತಿ ಅಥವಾ ನಂಬಿಕೆ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನ ಪದ್ಧತಿಯಲ್ಲಿ ಕಂಡುಬರುತ್ತದೆ. ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಸಾಧನವಾಗಿ ಪ್ರಾಣಿಗಳನ್ನು ಬಳಸುತ್ತಿದ್ದರಿಂದ ಅವನ್ನು ಈ ಮೂಲಕ ಸಂರಕ್ಷಿಸಿಕೊಂಡು ಬಂದಿರಬೇಕೆಂದು ಕೆಲವು ಮಾನವಶಾಸ್ತ್ರಜ್ಞರ ಊಹೆ. ಮತ್ತೆ ಕೆಲವು ವಿದ್ವಾಂಸರು ಮರಣಾನಂತರ ಜೀವಿ ಅಥವಾ ಆತ್ಮ ಪ್ರಾಣಿಗಳಲ್ಲಿ ಅಥವಾ ಕೆಲವು ಸಸ್ಯಗಳಲ್ಲಿ ಉಳಿಯುತ್ತದಾದ್ದರಿಂದ ಇಂಥ ಪ್ರಾಣಿ ಮತ್ತು ಸಸ್ಯಗಳನ್ನು ಉಳಿಸಿಕೊಂಡು ಬರಬೇಕು ಎಂಬ ಹಿಂದಿನವರ ನಂಬಿಕೆಯೇ ಈ ಕುಲದೇವತಾಪದ್ಧತಿಯ ಉಗಮಕ್ಕೆ ಕಾರಣವಿರಬೇಕೆಂದು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ಪ್ರಾಣಿಗಳು ಸಸ್ಯಗಳು ಗ್ರಹ ತಾರಿಕೆಗಳು ಕುಲದೇವತೆಗಳಾಗಿ ಇಂದಿಗೂ ಕೆಲವು ಕುಟುಂಬಗಳಲ್ಲಿ ಉಳಿದು ಬಂದಿವೆ. (ನೋಡಿ- ಕುಲದೇವತಾ-ಪದ್ಧತಿ).
ಇಷ್ಟದೇವತೆಗಳನ್ನು ಜನಪದದಲ್ಲಿ ಮೊರೆಬಿದ್ದ ದೇವರು ಎಂದು ಕರೆಯುತ್ತಾರೆ. ಯಾವುದಾದರೂ ಕಷ್ಟಸಂಕಷ್ಟಗಳೂ ಒದಗಿ ಬಂದು ಗೃಹದೇವತೆಯಾಗಲಿ ಕುಲದೇವತೆಯಾಗಲಿ ಸ್ಥಾನ ದೇವತೆಯಾಗಲಿ ಗ್ರಾಮದೇವತೆಯಾಗಲು, ರಕ್ಷಿಸಲು, ಸಮರ್ಥವೆನಿಸದೆ ಹೋದಾಗ ಇವುಗಳಿಗಿಂತಲೂ ಬೇರೆಯಾವುದಾದರೂ ದೊಡ್ಡ ದೇವರನ್ನು ಹುಡುಕಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ತಮಗೆ ಬಂದಿರುವ ಕಷ್ಟವನ್ನು ಪರಿಹರಿಸಿದರೆ ಪ್ರತಿವರ್ಷವೂ ಹರಕೆ ಸಲ್ಲಿಸುವುದಾಗಿ ಬೇರೆ ಯಾವುದಾದರೂ ಪ್ರಸಿದ್ಧ ದೇವತೆಗೆ ಮೊರೆಹೋಗುತ್ತಾರೆ. ಕಷ್ಟ ಪರಿಹಾರವಾಗಿ ಬಿಟ್ಟರೆ ಆ ಹೊಸ ದೇವತೆ ಅವರ ಇಷ್ಟದೇವತೆಯಾಗುತ್ತದೆ.
ಗೃಹದೇವತೆಗಳನ್ನು ಮಂದೇವ್ರು (ಮನೆದೇವರು) ಎಂದು ಕರೆಯುತ್ತಾರೆ. ಪ್ರತಿಯೊಂದು ಮನೆಯೂ ಪವಿತ್ರದೇವಾಲಯ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತೆಂಗಿನಕಾಯಿ ಇಟ್ಟಿರುವ ಕಳಶವನ್ನು ಪೂಜಿಸಿ ಗೃಹಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಗೃಹ ಪ್ರವೇಶದ ಸಂದರ್ಭದಲ್ಲೂ ಈ ಪೂಜೆ ಅತ್ಯಂತ ಶಾಸ್ತ್ರೀಯವಾಗಿ ನಡೆಯುತ್ತದೆ. ಜನಪದರಿಗೆ ಲಕ್ಷ್ಮಿ ಮಾತ್ರವಲ್ಲದೆ ಬೇರೆ ಬೇರೆ ಮಂದೇವರುಗಳು ಇರುತ್ತಾರೆ. 

ಜನಪದ ದೇವತೆಗಳಲ್ಲಿ ರೋಗದೇವತೆಗಳು ಅತ್ಯಂತ ಪ್ರಭಾವಶಾಲಿಗಳು. ರೋಗದೇವತೆಗಳಲ್ಲಿ ಐತ್ಗಮ್ಮ, ಪ್ಲೇಗಮ್ಮ, ಕಾಲರಮ್ಮ, ದಡಾರಮ್ಮ, ಸಿಡುಬಮ್ಮ ಮುಂತಾದವರು ಸುಪ್ರಸಿದ್ಧರು. ಗ್ರಾಮದೇವತೆ ದುರ್ಬಲಳಾದಾಗ ಇವರು ಊರನ್ನು ಪ್ರವೇಶಿಸುತ್ತಾರೆ. ಇವರು ಒಂದು ಕಿವಿಯನ್ನು ಹಾಸಿಕೊಂಡು ಒಂದು ಕಿವಿಯನ್ನು ಹೊದ್ದುಕೊಂಡು ಕಗ್ಗತ್ತಲಗವಿಗಳಲ್ಲಿ ಮಲಗಿರುತ್ತಾರಂತೆ. ಹಸಿವಿನಿಂದ ತತ್ತರಿಸಿದಾಗ ಕಾಕುಹಾಕುತ್ತ ಗುಡ್ಡದ ಗಾತ್ರ ಕಣ್ಣುಗಳಲ್ಲಿ ಕಿಡಿಕಾರುತ್ತ, ಕೊಳಗದಗಲ ಬಾಯಿ ಬಿಟ್ಟುಕೊಂಡು ಎಡಗೈಯಲ್ಲಿ ಮೊರ ಹಿಡಿದುಕೊಂಡು ಮಾನವರನ್ನೆಲ್ಲ ತೊಡೆದು ತಿಪ್ಪೆಗೆಸೆಯಲು ಬರುತ್ತಾರಂತೆ. ಕಾಯಿಲೆಗಳ ರೂಪದಲ್ಲಿ ಮಾನವರನ್ನು ಇವರು ಕೊಲ್ಲುತ್ತಾರೆ. ಇವರಿಗೆ ಕೋಳಿ, ಕುರಿ, ಆಡು, ಕೋಣ, ಹಂದಿಗಳನ್ನು ಬಲಿಕೊಟ್ಟು ಜನ ತಮ್ಮ ಗ್ರಾಮವನ್ನು ಉಳಿಸಿಕೊಳ್ಳುತ್ತಾರೆ.

ಸಣ್ಣಪುಟ್ಟ ಚಳಿಜ್ವರಗಳಿಗೆಲ್ಲ ಚೌಡಿ ಎಂಬ ದೇವತೆಯ ಸೋಕೇ ಕಾರಣವಂತೆ. ಇವಳ ಸ್ಪರ್ಶದಿಂದ ಕಾಯಿಲೆಗಳು ಬರುತ್ತವೆ. ಆದರೆ ಹರಕೆ ಹೊತ್ತು ಕೋಳಿ ಬಲಿ ಕೊಟ್ಟರೆ ಈ ದೇವತೆ ತೃಪ್ತಳಾಗುತ್ತಾಳೆ. ಇವಳ ಗಂಡ ಮುನೇಶ್ವರ. ಈತ ಭೂತ ಪ್ರೇತಗಳ ಒಡೆಯ. ನಟ್ಟನಡುರಾತ್ರಿ ಕಲ್ಲು ನೀರು ಕರಗುವ ವೇಳೆಯಲ್ಲಿ ಈ ಮುನೇಶ್ವರನ ಸಂಚಾರವಂತೆ. ದೆಯ್ಯಗಳು ಇವನನ್ನು ಹೊತ್ತುಕೊಂಡಿರುತ್ತವೆ. ಕೊಳ್ಳಿದೆಯ್ಯಗಳು ಉರಿಯುವ ಪಂಜನ್ನು ಹಿಡಿದು ಇವನ ಸುತ್ತಲೂ ಕುಣಿಯುತ್ತಿರುತ್ತವೆಯಂತೆ. ಈ ಉತ್ಸವವನ್ನು ಕಂಡವರು ಬೇರೆ ಯಾರೊಡನೆಯೂ ಈ ಸಂಗತಿಯನ್ನು ಹೇಳಬಾರದಂತೆ. ಹೇಳಿದರೆ ತಲೆ ಸಹಸ್ರಹೋಳಾಗುತ್ತದೆಯಂತೆ. ಇಂಥ ಬಗೆಬಗೆಯ ಬಣ್ಣಬಣ್ಣದ ಕಲ್ಪನೆಯ ದೇವತೆಗಳು ಆದಿವಾಸಿಗಳಲ್ಲಿ ಜೀವಂತವಾಗಿವೆ. ಅವರ ಜೀವನದ ಸರ್ವಸ್ವವೂ ಈ ದೇವತೆಗಳ ಅವಲಂಬನೆಯಿಂದಲೆ ರೂಪಿತವಾಗುತ್ತದೆ ಎಂದು ಅವರು ದೃಢವಾಗಿ ನಂಬುತ್ತಾರೆ.
 (ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ